ವಂದನಾರಾವ್ - 
	ಕರ್ನಾಟಕದ ಪ್ರಸಿದ್ಧ ಓಟಗಾರ್ತಿ. ತಂದೆ ಮಹಾಬಲೇಶ್ವರರಾಯ, ತಾಯಿ ವಸಂತಿ. ವಂದನಾ ಚಿಕ್ಕವಯಸ್ಸಿನಲ್ಲಿಯೇ ಓಟದತ್ತ ಆಕರ್ಷಿತರಾದರು. ಪ್ರೌಢಶಾಲೆಯಲ್ಲಿ ಅಭ್ಯಾಸಮಾಡುತ್ತಿರುವಾಗಲೇ ಅನೇಕ ಪ್ರಶಸ್ತಿಗಳನ್ನು ಸಂಪಾದಿಸಿದರು. ಲಾಸ್‍ಏಂಜಲೀಸ್‍ನಲ್ಲಿ  ನಡೆದ ಒಲಿಂಪಿಕ್ಸ್ ಕೂಟದಲ್ಲಿ(1984) ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಪದಕವನ್ನು ಗಳಿಸಲಾಗ ಲಿಲ್ಲ. ಅನಂತರ 1985ರಲ್ಲಿ ನೇಪಾಲದ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬ ಕರೆಬಂದರೂ ಇವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿಲ್ಲ. ಕೊರಿಯದ ರಾಜಧಾನಿ ಸಿಯೋಲ್‍ನಲ್ಲಿ ನಡೆದ (1986) ಏಷ್ಯಾಡ್ ಕ್ರೀಡೆಗಳಿಗೆ ಇವರು ಆಯ್ಕೆಯಾದರು. ಮಹಿಳಾ 4(00 ಮೀಟರ್ಸ್ ರಿಲೇ ಓಟದ ತಂಡದಲ್ಲಿ ಇವರೂ  ಸದಸ್ಯರಾಗಿದ್ದರು. ಈ ತಂಡಕ್ಕೆ ಸೇರಿದ ವಲ್ಸಮ್ಮ ಮೊದಲ ಸುತ್ತಿನಲ್ಲಿ ಓಡಿದರು. ಎರಡನೆಯ ಸುತ್ತಿನಲ್ಲಿ ವಂದನಾರಾವ್ ಮಿಂಚಿನ ವೇಗದಲ್ಲಿ ಓಡಿ ಭಾರತವನ್ನು ಮುಂದಿಟ್ಟರು. ಶೈನಿ ಅಬ್ರಹಾಂ ಅವರು ವಂದನಾ ಹಾಕಿಕೊಟ್ಟ ಅಗ್ರಪಂಕ್ತಿಯನ್ನೇ ಮುಂದುವರಿಸಿದರು. ಮುಂದೆ ಪಿ.ಟಿ.ಉಷಾ ಅದನ್ನು ಅತ್ಯುತ್ತಮವಾಗಿ ಗುರಿಮುಟ್ಟಿಸಿದರು. ಈ ಭಾರತೀಯ ಮಹಿಳಾ ತಂಡ ರಿಲೇ ಓಟಕ್ಕೆ ತೆಗೆದುಕೊಂಡ ಕಾಲಾವಧಿ 3 ನಿಮಿಷ 34.58 ಸೆಕೆಂಡುಗಳು. ಈ ತಂಡ ಭಾರತಕ್ಕೆ ಸ್ವರ್ಣಪದಕ ಗಳಿಸಿಕೊಟ್ಟಿತು. 1987 ಜುಲೈ ತಿಂಗಳಲ್ಲಿ ಸಿಂಗಪುರದಲ್ಲಿ ನಡೆದ ಏಳನೆಯ ಏಷ್ಯನ್ ಟ್ರ್ಯಾಕ್ ಮತ್ತು ಅಥ್ಲೆಟಿಕ್ ಕೂಟದಲ್ಲಿ ಭಾರತಕ್ಕೆ 4(400 ಮೀಟರ್ಸ್ ರಿಲೆಯಲ್ಲಿ (3 ನಿಮಿಷ 34.50 ಸೆಕೆಂಡ್) ಚಿನ್ನದ ಪದಕ ಲಭಿಸಿತ್ತು. ಇದರಲ್ಲಿಯೂ ವಂದನಾ ಎರಡನೆಯ ಸುತ್ತಿನಲ್ಲಿ ಓಡಿದ್ದರು.

	ಇಂಗ್ಲಿಷ್ ಕಾದಂಬರಿಗಳನ್ನು ಓದುವುದು, ಪಾಪ್ ಸಂಗೀತ ಕೇಳುವುದು ಇವರ ಅಚ್ಚುಮೆಚ್ಚಿನ ಹವ್ಯಾಸ. ಈಗ ಇವರು ಮಂಗಳೂರಿನ ಪಾಂಡೇಶ್ವರದಲ್ಲಿ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಕ್ರೀಡಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ 1987ರಲ್ಲಿ `ಅರ್ಜುನ ಪ್ರಶಸ್ತಿ ದೊರೆಯಿತು.							
	(ಕೆ.ಎನ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ